Articles
Rupa Hassan’s article dismantles issues that surround how we define productivity, gender bias and how home making is seen as unproductive labour by the State

Rupa Hassan’s article dismantles issues that surround how we define productivity, gender bias and how home making is seen as unproductive labour by the State

Rupa Hassan ‘The Labour of Love as Unproductive Labour!!’

English Summary: Rupa Hassan in this article dismantles issues that surround how we define productivity, gender bias and how homemaking is seen as unproductive labor by the State. She asks the foundational questions of who is a worker? what is production? and what is work? to start to redefine how we see the work of caregiving. While drawing attention to the fact that the majority of unorganized workers are homemakers she brings into focus patriarchal constructions of relationships that define who works and who doesn’t in the house. she asks not for a cessation of care work but for an awareness and respect for the work that women put into love, into nurture and care.

Bio:Rupa Hassan is an award winning Kannada poet, writer and activist who has been working over the decades on issues related to women’s rights, children’s rights and the environment to name a few. Her poetry has been translated into various languages. She, with Hasiru Bhoomi Trust, is currently involved in the successful work of rejuvenation of kalyanis (traditional water tanks) in Hassan that has seen drought over consecutive years.

ಪ್ರೀತಿಯುತ್ಪಾದನೆ ಅನುತ್ಪಾದಕ ಕೆಲಸ……!

ರೂಪ ಹಾಸನ

ಅದು 2011ರ ಜನಗಣತಿಯ ವರದಿ ಹೊರ ಬಿದ್ದ ಸಂದರ್ಭ. ನನ್ನ ಕಣ್ಣುಗಳು ಮಾಮೂಲಿನಂತೆ ಹೆಣ್ಣುಮಕ್ಕಳು ಹೇಗಿದ್ದಾರೆ? ಯಾವ್ಯಾವ ಸ್ಥಾನದಲ್ಲಿದ್ದಾರೆ? ಎಂದು ಹುಡುಕುತ್ತಿತ್ತು. ಆಗ ವಿಲಕ್ಷಣವಾದೊಂದು ಅಂಶ ಕಣ್ಣಿಗೆ ಬಿತ್ತು. ಗೃಹಿಣಿಯರನ್ನು ಜನಗಣತಿಯಲ್ಲಿ ‘ಅನುತ್ಪಾದಕ’ರೆಂದು ಗುರುತಿಸಲಾಗಿತ್ತು! ಗೃಹಿಣಿಯರ ಬೇರ್ಯಾವ ಕೆಲಸಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದಿದ್ದರೆ ಬೇಡ ಭವಿಷ್ಯದ ಕುಡಿಗಳನ್ನು ಹೊತ್ತು, ಹೆತ್ತು ಸಮಾಜಕ್ಕೆ ಕೊಡುವ ಬಹು ಮುಖ್ಯ ಉತ್ಪಾದಕತೆಯನ್ನೂ ನಮ್ಮ ಸರ್ಕಾರಗಳು ಅವಮಾನಿಸಿಬಿಟ್ಟವಲ್ಲಾ! ಸಮಾಜವಂತೂ ಅನಾದಿಯಿಂದ ಲಿಂಗ ಅಸಮಾನತೆಯ ಹೆಳವಿಗೆ ಒಳಗಾಗಿ ನರಳುತ್ತಿದೆ. ಆದರೆ…. ಸಂವಿಧಾನಬದ್ಧವಾಗಿ ರೂಪುಗೊಂಡ ಸರ್ಕಾರವೂ ಹೀಗೇ ಯೋಚಿಸಿದರೆ? ನನ್ನೊಂದಿಗೆ ಒಂದಿಬ್ಬರು ಗೆಳತಿಯರುಪತ್ರಿಕೆಗಳಿಗೆ ಬರೆದು ಸಂಕಟ ತೋಡಿಕೊಂಡಿದ್ದಷ್ಟೇ ಭಾಗ್ಯ. ಜಾತಿ/ವರ್ಗಗಳ ಅಸಮಾನತೆ ಕುರಿತು ಸದಾ ದನಿಯೆತ್ತುವ ಯಾವ ಅರ್ಥಶಾಸ್ತ್ರಜ್ಞರು, ಚಿಂತಕರು, ಬುದ್ಧಿಜೀವಿಗಳು, ಕನಿಷ್ಠ ಅರ್ಥಶಾಸ್ತ್ರ ಬೋಧಿಸುವ ಪ್ರಾಧ್ಯಾಪಕರೂ ಮಾಮೂಲಿನಂತೆ ತುಟಿ ಎರಡು ಮಾಡಲಿಲ್ಲ! ‘ಮಹಿಳೆಯರ ಸಮಸ್ಯೆ ಬಗ್ಗೆ ಅವರೇ ಮಾತಾಡಿಕೊಳ್ಳಲಿ, ಅದು ನಮಗೆ ಸಂಬಂಧಿಸಿದ್ದಲ್ಲ’ –ಎಂಬ ಧೋರಣೆ. ಇದು ದುರಂತವಲ್ಲವೇ?

ಆಗ ‘ದುಡಿಮೆಗಾರರು’ ಎಂದರೆ ಯಾರು? ‘ಉತ್ಪಾದನೆ’ ಎಂದರೆ ಏನು? ‘ಕೆಲಸ’ ಎಂದರೆ ಏನು? ಎಂದು ಯೋಚಿಸತೊಡಗಿದೆ. ಎಂದೋ ಕೇಳಿದ್ದ ಪುಟ್ಟ ದೃಷ್ಟಾಂತ ನೆನಪಾಯ್ತು. ಒಬ್ಬ ಗಂಡಸಿರುತ್ತಾನೆ ಅವನಿಗೆ ಕುಟುಂಬ ಇರುವುದಿಲ್ಲ. ಹೀಗಾಗಿ ಮನೆಯ ದೇಖರೇಕಿಯನ್ನೆಲ್ಲ ನೋಡಿಕೊಳ್ಳಲು ಸಹಾಯಕಿಯೊಬ್ಬಳನ್ನು ಇಟ್ಟುಕೊಳ್ಳುತ್ತಾನೆ. ಅವಳಿಗೆ ತಿಂಗಳಿಗೆ ಸಾವಿರ ರೂಪಾಯಿ ಸಂಬಳವೆಂದು ನಿಗದಿಯಾಗಿರುತ್ತದೆ. ಕಾಲಕ್ರಮೇಣ ಅವರಲ್ಲಿ ಅನುರಾಗ ಹುಟ್ಟಿ ಅವರಿಬ್ಬರೂ ಮದುವೆಯಾಗುತ್ತಾರೆ. ಅಂದಿನಿಂದ ಅವನು ಅವಳಿಗೆ ಕೊಡುತ್ತಿದ್ದ ಸಂಬಳ ನಿಲ್ಲಿಸಿ ಬಿಡುತ್ತಾನೆ! ಸಂಬಳ ಪಡೆಯುತ್ತಿದ್ದಾಗ ದುಡಿಮೆ, ಕೆಲಸ, ಉತ್ಪಾದನೆ…..ಒಟ್ಟಾರೆ ಅರ್ಥ ವ್ಯವಸ್ಥೆಯ ಒಳಗಿದ್ದ ಆ ಮಹಿಳೆ, ದಿಢೀರನೆ ‘ಸೇವೆ’ ಎನ್ನುವ ವ್ಯವಸ್ಥೆಯೊಳಗೆ ಸೇರಿಕೊಂಡು ಸಂಪಾದನೆಯನ್ನು ಕಳೆದುಕೊಳ್ಳುತ್ತಾಳೆ! ಹೀಗೆ ನಮ್ಮ ಹೆಣ್ಣುಮಕ್ಕಳ ಕೆಲಸ ಯಾವುದು, ಸೇವೆ ಯಾವುದು ಎನ್ನುವುದನ್ನು ನಿರ್ಧರಿಸುವುದೇ ಕಷ್ಟವಾಗಿರುವುದರಿಂದ, ಹಲವು ಬಾರಿ ಕುಟುಂಬ ಪ್ರೀತಿಯೇ ಅವಳನ್ನು ಸೇವೆಯ ಹೆಸರಿನಲ್ಲಿ ತೊಡಗಿಸಿಯೂ, ಬಂಧಿಸಿಯೂ ಇಟ್ಟಿರುವುದರಿಂದ ಅವಳ ಗೃಹಕೃತ್ಯದ ಯಾವ ಕೆಲಸಕ್ಕೂ ಹಣದ ಮೌಲ್ಯ ದೊರೆಯುವುದಿಲ್ಲ. ಹೀಗೆಂದೇ ಆರ್ಥಿಕ ವ್ಯವಸ್ಥೆಯಡಿ ದಾಖಲಾಗುವುದಿಲ್ಲ. ಅವಳ ಶ್ರಮಕ್ಕೆ
ಆರ್ಥಿಕ ಮೌಲ್ಯ ಹಾಗೂ ಉತ್ಪಾದನಾ ಸಾಮಥ್ರ್ಯ ಇಲ್ಲದಿರುವುದರಿಂದ ಇಂತಹ ಕೆಲಸಕ್ಕೆ ಮಾನ್ಯತೆಯಾಗಲೀ, ಗೌರವವಾಗಲೀ ಇಲ್ಲ!

ಬಹು ದೊಡ್ಡ ಸಂಖ್ಯೆಯ ಅಸಂಘಟಿತವಲಯದ ಮತ್ತು ಅರ್ಥವ್ಯವಸ್ಥೆಯೊಳಗೆ ಸೇರದ ದುಡಿಮೆಗಾರರು ಎಂದರೆ ಗೃಹಿಣಿಯರು ಎಂದು ವಿಶ್ವಸಂಸ್ಥೆ ಪರಿಗಣಿಸುತ್ತದೆ. ಏಕೆಂದರೆ ಅವರು ಮಾಡುತ್ತಿರುವಂತಹ ಮನೆಗೆಲಸ, ಗೃಹಕೃತ್ಯ, ಮಕ್ಕಳ, ಹಿರಿಯರ ಲಾಲನೆ ಪಾಲನೆ, ಆಹಾರ ತಯಾರಿಕೆಗೆ ತಗುಲುವಂತಹ ಮೌಲ್ಯ, ಅರ್ಥವ್ಯವಸ್ಥೆಯಲ್ಲಿ ಎಲ್ಲಿಯೂ ದಾಖಲಾಗುವುದೇ ಇಲ್ಲ. ಇಡೀ ಪ್ರಪಂಚದಲ್ಲಿ ಹೆಣ್ಣುಮಕ್ಕಳು ಈ ಸೇವೆಯ ಹೆಸರಿನಲ್ಲಿ ಮಾಡುತ್ತಿರುವಂಥಹ ಕೆಲಸಕ್ಕೆ ಹಣದ ಮೌಲ್ಯವನ್ನೇನಾದರೂ ಕಟ್ಟಿದರೆ ಅದು ಸುಮಾರು 11 ಟ್ರೆಲಿಯ ಯು.ಎಸ್.ಡಾಲರ್‍ಗಳಾಗುತ್ತದೆಂದು ವಿಶ್ವಸಂಸ್ಥೆ ಅಂದಾಜಿಸಿದೆ. ಇದಕ್ಕೆ ಒಂದು ಸಮೀಕರಣ ಕೊಡುವುದಾದರೆ ಭಾರತ ಇನ್ನೂ ಒಂದು ಟ್ರೆಲಿಯ ಯು.ಎಸ್.ಡಾಲರ್‍ಗಳ ವಹಿವಾಟು [ಟರ್ನ್‍ಓವರ್] ತಲುಪಲು ಸಾಧ್ಯವಾಗಿಲ್ಲವಂತೆ! ಹಾಗಾದಿರಿನ್ನು 11 ಟ್ರೆಲಿಯ ಯು.ಎಸ್.ಡಾಲರ್ ಎಂದರೆ ಎಷ್ಟು ಬೃಹತ್ತಾದುದು ಎಂದು ಊಹೆ ಮಾಡಿಕೊಳ್ಳಿ. ಜಗತ್ತಿನ ಎಲ್ಲಾ ಕೆಲಸಗಳ ಶೇಕಡಾ 60 ರಷ್ಟನ್ನು ಮಹಿಳೆಯರು ಮಾಡಿದರೂ ಅವರ ಜಾಗತಿಕ ವರಮಾನ ಶೇ. 10 ರಷ್ಟು ಮಾತ್ರ! ಎಲ್ಲ ದೇಶಗಳಲ್ಲಿ ಮಹಿಳೆಯರು ಮನೆ ಹಾಗೂ ಮಾರುಕಟ್ಟೆಯ ಕೆಲಸಗಳಿಗಾಗಿ ಪುರುಷರಿಗಿಂತಾ ಶೇ.12 ರಷ್ಟು ಜಾಸ್ತಿ ದುಡಿಯುತ್ತಾರೆಂದು ಮತ್ತೊಂದು ಸಮೀಕ್ಷಾ ವರದಿ ಹೇಳುತ್ತದೆ. ಗೃಹಿಣಿಯರು ಇಷ್ಟೊಂದು ಅಗಾಧವಾದ ವೇತನರಹಿತವಾದ ಸೇವೆ ಅಥವಾ ದುಡಿಮೆ ಮಾಡಿಯೂ, ಪ್ರೀತಿಯಿಂದ ಮನುಷ್ಯ ಬಾಂಧವ್ಯದ ಉತ್ಪಾದನೆಯನ್ನು ಪ್ರತಿ ಕ್ಷಣವೂ ಮಾಡುತ್ತಿದ್ದೂ ಅದಕ್ಕೆ ಘನತೆಯಿಲ್ಲವೆಂದಾದರೆ ಇದನ್ನು ಘಾತಕ ಸಮಾಜವೆನ್ನಬೇಕಲ್ಲವೇ?

ಒಮ್ಮೆ ಕಾರ್ಯಕ್ರಮವೊಂದರಲ್ಲಿ ಪದವಿ ಪೂರೈಸಿದ ಯುವಜನರೊಂದಿಗೆ ಸಂವಾದಿಸುತ್ತಿದ್ದೆ. ಮೇಲಿನ ವಿಷಯವನ್ನು ಪ್ರಸ್ತಾಪಿಸಿ,”ಅದರಲ್ಲೂ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ತಮ್ಮ ಕುಟುಂಬಕ್ಕಾಗಿ ನೀರು, ಉರುವಲು ಸಂಗ್ರಹಿಸಲೇ ಗಂಟೆಗಟ್ಟಲೇ, ಮೈಲಿಗಟ್ಟಲೆ ನಡೆಯಬೇಕಾಗುತ್ತದೆ. ಅದಕ್ಕಾಗಿ ವಿನಿಯೋಗವಾಗುವ ಅವರ ಶ್ರಮ, ಸಮಯಕ್ಕೆ ಹೇಗೆ ಬೆಲೆ ಕಟ್ಟುವುದು? ಆ ಪೋಲಾದ ಸಮಯದಲ್ಲಿ ಅವರು ಪಡೆಯಬೇಕಿದ್ದ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಸಾಮಥ್ರ್ಯವೃದ್ಧಿಯಿಂದ ವಂಚಿತರಾಗುತ್ತಾರಲ್ಲಾ ಇದನ್ನು ಹೇಗೆ ತುಂಬಿಕೊಡುವುದು?” ಎಂದೆ. ಒಬ್ಬ ಯುವಕ “ಇದನ್ನೆಲ್ಲ ಮಾಡೋದಕ್ಕೇ ಹೆಣ್ಣುಮಕ್ಕಳಿರೋದಲ್ವ ಮೇಡಂ? ಅವರು ಮಾಡದಿದ್ದರೆ ಈ ಕೆಲಸಗಳನ್ಯಾರು ಮಾಡ್ತಾರೆ?” ಎಂದು ಪ್ರಶ್ನಿಸಿದ. ಕ್ಷಣ ದಿಙ್ಞೂಢಳಾದೆ. ಆದರೆ ಇದು ಅವನ ತಪ್ಪಲ್ಲ. ಹೆಣ್ಣುಮಕ್ಕಳಿರೋದೇ ಇಂತಹ ಕೆಲಸ ಮಾಡಲು ಎಂಬ ‘ಮೈಂಡ್ ಸೆಟ್’ ರೂಪಿಸಿರುವ ವ್ಯವಸ್ಥೆಯ ತಪ್ಪು. ಹೆಣ್ಣನ್ನು ಕುರಿತ ಇಂತಹಾ ಋಣಾತ್ಮಕ ಮನೋಭಾವವನ್ನು ಒಡೆದು ಅದು ತನ್ನದೂ ಜವಾಬ್ದಾರಿಯೆಂಬ ಅರಿವನ್ನು ಮೂಡಿಸುವ ಅನಿವಾರ್ಯತೆ ಇಂದು ನಮ್ಮ ಮೇಲಿದೆ. ನಾನು ಆ ಪ್ರಶ್ನೆಗೆ ಉತ್ತರಿಸುತ್ತಾ “ನಮ್ಮನ್ನ ಸೃಷ್ಟಿ ಮಾಡುವಾಗಲೇ ಹೆಣ್ಣಿನ ಹಣೆಯಲ್ಲಿ, ‘ನೀನು ಇದನ್ನೆಲ್ಲಾ ಮಾಡಲೆಂದೇ ಹುಟ್ಟಿರುವುದು’ ಎಂದೂ, ಗಂಡಸಿನ ಹಣೆಯಲ್ಲಿ, ‘ನೀನು ಕುರ್ಚಿ ಮೇಲೆ ಕೂತು, ಕಾಫಿ ಕುಡೀತಾ, ಪೇಪರ್ ಓದ್ತಾ, ಆರಾಮವಾಗಿ ಇರು’ ಎಂದೂ ಬರೆದು ಕಳಿಸಲಾಗಿದೆಯಲ್ವೇನಪ್ಪ?’ ಎಂದೆ. ಹೆಣ್ಣು-ಗಂಡಿನ ಸಮಾನತೆ ಮತ್ತು ಕೆಲಸದ ಸಮಾನ ಹಂಚಿಕೆಯ ಕುರಿತು ಇತ್ತೀಚೆಗೆ ನಗರಪ್ರದೇಶಗಳಲ್ಲಿ ಒಂದಿಷ್ಟಾದರೂ ತಿಳಿವು ಮೂಡಿದೆ. ಬದಲಾವಣೆ ಕಾಣುತ್ತಿದ್ದೇವೆ. ಆದರೆ ಗ್ರಾಮೀಣಪ್ರದೇಶದಲ್ಲಿ, ಪುಟ್ಟ ಪಟ್ಟಣಗಳಲ್ಲಿ ಈ ಬದಲಾವಣೆ ಕಾಣಲು ಎಷ್ಟು ಶತಮಾನಗಳು ಬೇಕೋ?

ತಲತಲಾಂತರದಿಂದ ನಿಕೃಷ್ಟ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದ ಕೆಲ ತಳಸಮುದಾಯಗಳು ಇಂದು, ‘ಕುಳವಾಡಿಕೆ’ ಮಾಡುವುದಿಲ್ಲ ಎಂದು ದಿಟ್ಟವಾಗಿ ಹೇಳಿ ಅವುಗಳನ್ನು ನಿರಾಕರಿಸುತ್ತಿವೆ. ಹೀಗಾಗಿ ಅದಕ್ಕೆ ಪರ್ಯಾಯಗಳನ್ನು ಅನಿವಾರ್ಯವಾಗಿ ಹುಡುಕಿಕೊಳ್ಳಲಾಗುತ್ತಿದೆ. ಹಾಗೇ ನಾವು ಹೆಣ್ಣುಮಕ್ಕಳೂ ನಮ್ಮ ಕುಲಕಸುಬಿನಂತೆಯೇ ಆಗಿ ಹೋದ ಈ ಮನೆವಾರ್ತೆ, ಲಾಲನೆ, ಪಾಲನೆ…. ಇತ್ಯಾದಿ ಕೆಲಸ ಮಾಡುವುದಿಲ್ಲ ಎಂದು ನಿರಾಕರಿಸಿದರೆ….? ಪ್ರತಿಭಟಿಸಿ ಕುಳಿತರೆ? ನಮ್ಮ ಕುಟುಂಬ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ ಹೇಗಿರುತ್ತದೆ? ಒಮ್ಮೆ ಕಲ್ಪಿಸಿಕೊಳ್ಳಿ. ಅಲ್ಲೋಲಕಲ್ಲೋಲ ಆಗಿಬಿಡಬಹುದು!

ಆದರೆ ಖಂಡಿತ ಭಾರತೀಯ ಸಂದರ್ಭದಲ್ಲಿ ಹಾಗಾಗುವುದಿಲ್ಲ. ಏಕೆಂದರೆ ಭಾರತೀಯ ಹೆಣ್ಣುಮಗಳು ಎಂದಿಗೂ ತನ್ನ ಕುಟುಂಬ, ಸಂಬಂಧಗಳು, ಪ್ರೀತಿ, ವಿಶ್ವಾಸವೇ ಎಲ್ಲಕ್ಕಿಂತಾ ದೊಡ್ಡದೆಂದು ಭಾವಿಸುತ್ತಾ ಬಂದಿದ್ದಾಳೆ. ಅದಕ್ಕೆಂದೇ ಸಹಿಸುತ್ತಾ, ಹೊಂದಾಣಿಕೆ ಮಾಡಿಕೊಳ್ಳುತ್ತಾ ಬಂದಿದ್ದಾಳೆ. ಆದರೆ ಅವಳ ಈ ಬಾಂಧವ್ಯದ ಬಗೆಗಿನ ಭಾವುಕ ಪ್ರೀತಿಯನ್ನು ಶತಮಾನಗಳಿಂದ ಅವಗಣಿಸುತ್ತಾ ಬಂದಂತೆ ಇನ್ನು ಮುಂದೆಯೂ ಆಗಬಾರದಲ್ಲಾ? ಅವಳು ‘ಗೃಹಿಣಿ’ ಸೇವೆಯ ಮೂಲಕ ಅವಿರತವಾಗಿ ಮಾಡುತ್ತಿರುವ ಕೆಲಸಗಳು, ಉತ್ಪಾದಿಸುತ್ತಿರುವ ಪ್ರೀತಿ, ಮಮತೆ, ವಾತ್ಸಲ್ಯಗಳ ಅರಿವು ಸಮಾಜಕ್ಕೆ ಮೂಡಬೇಕು. ಈ ಎಲ್ಲಾ ಕೆಲಸಗಳನ್ನು ಸಮಾನವಾಗಿ ಹಂಚಿಕೊಳ್ಳುವ ಸಹೃದಯತೆಯೂ ಪುರುಷ ಸಮುದಾಯಕ್ಕೆ ಅರಿವಾಗಬೇಕು. ಆ ಅರಿವೇ ಹೆಣ್ಣು ಮಾಡುತ್ತಿರುವ ಕೆಲಸಕ್ಕೆ ಘನತೆಯನ್ನೂ, ಕೃತಜ್ಞತೆಯನ್ನೂ ತಂದುಕೊಡುತ್ತದೆ, ಆಗ ನಮ್ಮ ಆರ್ಥಿಕ ಮೌಲ್ಯಮಾಪನದ ಮಾನದಂಡಗಳೂ ಬದಲಾಗುತ್ತವೆ. ಇದು ನನ್ನ ಮಾತಲ್ಲ! ಖ್ಯಾತ ಅರ್ಥಶಾಸ್ತ್ರಜ್ಞ ಅಮಾತ್ಯಸೇನ್ ಅವರ ಮಾತುಗಳು.

This article was first published in Andolana, Mysore.

Photo credit: Open Source


AUTHOR: Rupa Hassan

Rupa Hassan is an award winning Kannada poet, writer and activist who has been working over the decades on issues related to women’s rights, children’s rights and the environment to name a few. Her poetry has been translated into various languages. She, with Hasiru Bhoomi Trust, is currently involved in the successful work of rejuvenation of kalyanis (traditional water tanks) in Hassan that has seen drought over consecutive years.

The author’s views are personal.