Articles
Chukki Nanjundaswamy, Vice President of Swaraj India in Conversation with Mallige Sirimane

Chukki Nanjundaswamy, Vice President of Swaraj India in Conversation with Mallige Sirimane

ಸ್ವರಾಜ್ ಇಂಡಿಯಾ ಕರ್ನಾಟಕದ ಉಪಾಧ್ಯಕ್ಷರಾದ ಚುಕ್ಕಿ ನಂಜುಂಡಸ್ವಾಮಿ ಅವರೊಂದಿಗೆ ಮಲ್ಲಿಗೆ ಸಿರಿಮನೆಯವರು ನಡೆಸಿದ ಮಾತುಕತೆ

ರೈತ ಚಳವಳಿಯ ಪ್ರಮುಖ ನಾಯಕರಾಗಿ ನಮಗೆ ಪುರುಷರು ಹೆಚ್ಚು ಕಂಡರೂ , ಅದರ ಹಿಂದೆ ನಿಂತಿದ್ದ ಶಕ್ತಿ ಮಹಿಳೆಯರದ್ದೇ! ನಿಜವಾಗಿ ಹೇಳಬೇಕೆಂದರೆ, ಬೇರೆ ಯಾವುದೇ ರಾಜಕೀಯ ಆಕಾಂಕ್ಷೆಗಳಿಲ್ಲದೆ ರೈತ ಚಳವಳಿಯನ್ನು ಗಟ್ಟಿಯಾಗಿ ನಿಂತು ನಡೆಸಿದವರು, ನಡೆಸುತ್ತಿರುವವರು, ಅದನ್ನು ಪೂರ್ಣವಾಗಿ ಬೆಂಬಲಿಸಿದವರು ರೈತ ಮಹಿಳೆಯರೇ ಆಗಿದ್ದಾರೆ

ಮಹಿಳಾ ಹಕ್ಕುಗಳ ಕುರಿತು ಮಹಿಳಾ ದಿನಾಚರಣೆಯಂದು ದೊಡ್ಡ ಚರ್ಚೆ ನಡೆಯುತ್ತದೆ. ಕರ್ನಾಟಕದಲ್ಲಿ ರೈತ ಚಳವಳಿಗೆ ದೊಡ್ಡ ಇತಿಹಾಸವೇ ಇದೆ. ಈ ಚಳವಳಿಯ ಯಶಸ್ಸಿನಲ್ಲಿ ಯಾರು ಪಾಲು ಎಷ್ಟು ಎಂಬುದರ ಮೌಲ್ಯಮಾಪನ ಇನ್ನೂ ಆಗಿಲ್ಲ.

ಪಾಶ್ಚಾತ್ಯ ದೇಶಗಳಲ್ಲಿ ರೈತ ಸ್ತ್ರೀವಾದ ಎನ್ನುವ ಪರಿಕಲ್ಪನೆ ಗರಿಗಟ್ಟಿಕೊಳ್ಳುವ ಈ ಹೊತ್ತಿನಲ್ಲಿ ಮಹಿಳಾ ಪರ ಹೋರಾಟಗಾರರಾದ ಮಲ್ಲಿಗೆ ಸಿರಿಮನೆಯವರು ಚುಕ್ಕಿ ನಂಜುಂಡಸ್ವಾಮಿ ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.

ಕರ್ನಾಟಕದ ಜನ ಸಂಘಟನಗೆಳಲ್ಲಿ ರೈತ ಸಂಘದ ಚರಿತ್ರೆ ಮತ್ತು ಪಾಲು ದೊಡ್ಡದು. ರೈತ ಚಳವಳಿ ಅನಸೂಯಮ್ಮ, ನಂದಿನಿ ಜಯರಾಂ, ಸುನಂದಾ ಜಯರಾಂ ಅವರಂಥ ಅಪ್ರತಿಮ ನಾಯಕಿಯರನ್ನು ಸೃಷ್ಟಿಸಿದೆ. ಇವರೆಲ್ಲಾ ಮಹಿಳಾ ನೆಲೆಯಿಂದ ವಿಶಾಲವಾದ ರೈತ ಚಳವಳಿಯ ತಾತ್ತ್ವಿಕತೆಯನ್ನು ಕಟ್ಟಿಕೊಂಡ ರೀತಿಯೂ ಅಪೂರ್ವವಾದದ್ದು. 80ರ ದಶಕದಲ್ಲಿ ನಾಡಿನ ರೈತ ಸಮುದಾಯದಲ್ಲಿ ಸ್ವಾಭಿಮಾನ, ಕೆಚ್ಚನ್ನು ಮೂಡಿಸಿದ, ಇಂದಿನವರೆಗೆ ಹಲವು ತಲೆಮಾರುಗಳ ಚಿಂತನಾ ಕ್ರಮವನ್ನೂ, ಬದುಕಿನ ವಿಧಾನವನ್ನೂ ಗಾಢವಾಗಿ ಪ್ರಭಾವಿಸಿದ ರೈತ ಚಳವಳಿಯನ್ನು, ಮಹಿಳೆಯರ ದೃಷ್ಟಿಕೋನದಿಂದ ಹೇಗೆ ಗ್ರಹಿಸಬಹುದು, ರೈತ ಮಹಿಳಾ ಸಮುದಾಯ ಆ ಚಳವಳಿಯೊಳಗೆ ಜೀವಸೆಲೆಯಂತೆ ನಿರ್ವಹಿಸಿದ ಪಾತ್ರವೇನು, ಇವೇ ಮೊದಲಾದ ಬಹುಮುಖ್ಯವಾದ ಸಂಗತಿಗಳ ಸುತ್ತ ಹೊಸ ತಲೆಮಾರಿನ ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿಯವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಪ್ರಶ್ನೆ: ರೈತ ಚಳವಳಿಯು ಮಹಿಳೆಯರನ್ನು ಮತ್ತು ಮಹಿಳಾ ಪ್ರಶ್ನೆಯನ್ನು ಆರಂಭದಿಂದ ಹೇಗೆ ನೋಡಿದೆ? ರೈತ ಚಳವಳಿ ಒಂದು ಸಮುದಾಯದ ಪ್ರಶ್ನೆಯನ್ನು ಎತ್ತಿದ್ದಷ್ಟೇ ಅಲ್ಲ, ಅದು ಸಾಮಾಜಿಕ ನ್ಯಾಯದ ಪರವಾಗಿ ಮಾತನಾಡಿತು. ಈ ಹಿನ್ನೆಲೆಯಲ್ಲಿ ಚಳವಳಿಯಲ್ಲಿ ಮಹಿಳೆಯರ ಪಾತ್ರ ಮತ್ತು ಸ್ಥಾನವನ್ನು ಹೇಗೆ ಗುರುತಿಸಬಹುದು?

ರೈತ ಚಳವಳಿಯ ಬೆನ್ನೆಲುಬೇ ಮಹಿಳೆಯರು ಅಂತ ಹೇಳಿದರೆ ಖಂಡಿತವಾಗಿಯೂ ಉತ್ಪ್ರೇಕ್ಷೆಯಾಗುವುದಿಲ್ಲ. ರೈತ ಚಳವಳಿ ಆರಂಭವಾದಾಗ 80ರ ದಶಕದಲ್ಲಿ, ರೈತರು, ರೈತ ಕೂಲಿ ಕಾರ್ಮಿಕರು ಮತ್ತು ರೈತ ಮಹಿಳೆಯರ ಪ್ರಶ್ನೆಯನ್ನು ಒಟ್ಟೊಟ್ಟಿಗೇ ಎತ್ತಿತು. ಚಳವಳಿಗೆ ಮಹಿಳೆಯರ ಕುರಿತಾಗಿ ತನ್ನದೇ ಆದ ನೀತಿ ಅಥವ ವಿಶೇಷವಾದ ಯೋಜನೆ ಆರಂಭದಲ್ಲಿ ಇರಲಿಲ್ಲ್ಲ. ಅದರ ನಾಯಕರು ಸಮಾಜವಾದಿ ಹಿನ್ನೆಲೆಯಿಂದ ಬಂದವರಾಗಿದ್ದ ಕಾರಣಕ್ಕೆ. ಆದ್ದರಿಂದ, ಕೃಷಿ ಮತ್ತು ಗ್ರಾಮೀಣ ಆರ್ಥಿಕತೆ ಬಹುಪಾಲು ರೈತ ಮಹಿಳೆಯರ ದುಡಿಮೆಯ ಮೇಲೆ ನಿಂತಿದೆ ಎಂಬುದರಲ್ಲಿ ರೈತ ಚಳವಳಿಗೆ ಸ್ಪಷ್ಟತೆ ಇತ್ತು.

ಪ್ರಶ್ನೆ: ರೈತ ಸಂಘಟನೆಯಲ್ಲಿ ಮಹಿಳಾ ಪ್ರಾತಿನಿಧ್ಯ ಮತ್ತು ಪಾಲ್ಗೊಳ್ಳುವಿಕೆಯ ಬಗ್ಗೆ ಹೇಳಿ.

ಚುಕ್ಕಿ: ಚಳವಳಿಯ ತೀರ ಆರಂಭದಿಂದಲೂ ಚಳವಳಿಯಲ್ಲಿ ಸಕ್ರಿಯವಾಗಿದ್ದವರು ಅರಳಾಳುಸಂದ್ರದ ಅನಸೂಯಮ್ಮನವರು. ಮೊದಲಿನಿಂದಲೂ ಸಂಘಟನೆಯ ಎಲ್ಲಾ ಚಟುವಟಿಕೆಗಳಲ್ಲಿ, ಹೋರಾಟಗಳಲ್ಲಿ ಅವರು ಅತ್ಯಂತ ಸಕ್ರಿಯವಾಗಿದ್ದರು. 87ರಷ್ಟು ಹಿಂದೆ ಇಡೀ ರಾಜ್ಯ ಸುತ್ತಾಡಿ, ಎಲ್ಲಾ ಜಿಲ್ಲೆಗಳ ರೈತ ಮಹಿಳೆಯರನ್ನು ಸಂಪರ್ಕಿಸಿ, ಹಳಿಯಾಳದಲ್ಲಿ ರಾಜ್ಯ ಮಟ್ಟದ ಒಂದು ಮಹಿಳಾ ಸಮಾವೇಶವನ್ನು ಅವರು ಸಂಘಟಿಸಿದ್ದರು. ಅದರಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತ ಹೆಣ್ಣುಮಕ್ಕಳು ಪಾಲ್ಗೊಂಡಿದ್ದು ನಿಜಕ್ಕೂ ಬಹಳ ಮಹತ್ವದ ವಿಚಾರ.

ಅನಸೂಯಮ್ಮನವರು ಆಗ ಎಲ್ಲಾ ರೈತ ನಾಯಕರಿಗೆ ನಿಮ್ಮ ಹೆಂಡತಿ ಮತ್ತು ಮನೆಯ ಮಹಿಳೆಯರನ್ನು ಕರೆದುಕೊಂಡು ಬರಲೇಬೇಕು ಎಂದು ಹೇಳಿದ್ದರು. ಅದರಿಂದಾಗಿ ನಮ್ಮ ತಾಯಿ, ಮತ್ತೊಬ್ಬ ಪ್ರಮುಖ ನಾಯಕರಾಗಿದ್ದ ಸುಂದರೇಶ್‌ರವರ ಪತ್ನಿ ಮೊದಲಾಗಿ ಎಷ್ಟೋ ಕುಟುಂಬಗಳ ಹೆಣ್ಣುಮಕ್ಕಳು ಅದರಲ್ಲಿ ಪಾಲ್ಗೊಳ್ಳಲು ಸಾಧ್ಯವಾಯಿತು. ರೈತ ನಾಯಕಿ ಸುನಂದಾ ಜಯರಾಂರವರೂ ಕೂಡಾ ಮುಖ್ಯವಾದ ಸ್ಥಾನದಲ್ಲಿದ್ದ ಜನಪ್ರಿಯ ನಾಯಕಿಯಾಗಿದ್ದದ್ದನ್ನು ಗಮನಿಸಬಹುದು. ಪ್ರತೀ ಅಕ್ಟೋಬರ್‌ 2ರಂದು ರಾಜ್ಯ ಸಮಾವೇಶ ನಡೆಯುತ್ತಿತ್ತಲ್ಲ, ಅಲ್ಲಿಗೆ ಪ್ರತಿಯೊಬ್ಬರೂ ತಮ್ಮ ಕುಟುಂಬದ ಹೆಣ್ಣುಮಕ್ಕಳನ್ನು ಕರೆತರುವುದು ಒಂದು ರೀತಿಯಲ್ಲಿ ಕಡ್ಡಾಯವಾದ ವಿಷಯವಾಗಿತ್ತು. ಅಂದು ಅವರೆಲ್ಲ ಹಸಿರು ಕಾಟನ್‌ ಸೀರೆ ಉಟ್ಟು ಸಂಭ್ರಮದಿಂದ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದರು. ಇದೆಲ್ಲದರಿಂದ, ರೈತ ಚಳವಳಿ ಒಂದು ರೀತಿಯಲ್ಲಿ ಒಟ್ಟಾರೆ ಕುಟುಂಬದ ಚಳವಳಿಯಾಗಿತ್ತು.

ಪ್ರಶ್ನೆ: ರೈತ ಚಳವಳಿಯ ಆರಂಭದಿಂದಲೂ ದೊಡ್ಡ ಮಟ್ಟದ ಜನಬೆಂಬಲ ದೊರಕಿದೆ. ಈ ಬೆಂಬಲದ ಸಾಲಿನಲ್ಲಿ ಮಹಿಳೆಯರು ಎಲ್ಲಿದ್ದರು? ಅಂದರೆ ಗ್ರಾಮೀಣ ಮಹಿಳಾ ಸಮುದಾಯ ಚಳವಳಿಯ ಜೊತೆ ಗುರುತಿಸಿಕೊಂಡ ಬಗೆ ಯಾವುದು?

ಚುಕ್ಕಿ: ನಿಜ ಹೇಳಬೇಕೆಂದರೆ ರೈತ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಬಿಟ್ಟುಬಿಟ್ಟರೆ, ರೈತ ಹೋರಾಟದ ಇತಿಹಾಸವೇ ಅಪೂರ್ಣವಾಗಿಬಿಡುತ್ತದೆ. ಅನಸೂಯಮ್ಮನವರು, ಶಿವಮೊಗ್ಗದ ಅನ್ನಪೂರ್ಣಮ್ಮ, ಸರೋಜಮ್ಮ ಮೊದಲಾದವರೆಲ್ಲ 1984ರಲ್ಲಿ ನಡೆದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದವರು. ಆ ಕಾಲದಲ್ಲೇ ಜೈಲಿಗೆ ಹೋದವರು. ಹಾಲೂಡಿಸುವ ಮಕ್ಕಳನ್ನು ಬಿಟ್ಟು ಹೋಗಿದ್ದ ಅವರು ಹಲವು ದಿನ ಮನೆಗೆ ಬರಲಾಗದೆ, ಮಗುವನ್ನು ತಾಯಿಯ ಬಳಿಗೆ ಕರೆದೊಯ್ಯಲೂ ಕೂಡ ಯಾರೂ ಇಲ್ಲದಂಥ ಸ್ಥಿತಿಯಲ್ಲಿ, ಜೈಲಿನಿಂದ ಹೊರಬರುವ ಹೊತ್ತಿಗೆ ಎದೆಹಾಲು ಬತ್ತಿಹೋಗಿ ಮಗುವಿಗೆ ಹಾಲಿಲ್ಲದಂತಾಗಿದ್ದು. ಇಂತಹ ಎಷ್ಟೋ ಘಟನೆಗಳನ್ನು ನಾನು ಕೇಳಿದ್ದೇನೆ.

ಅದಲ್ಲದೆ, ಚಳುವಳಿಗಾರರು ರಾತ್ರಿ ಸರಿಹೊತ್ತಿನಲ್ಲಿ ತಂಡೋಪತಂಡವಾಗಿ ಬಂದರೂ, ಯಾವತ್ತೂ ಬೇಸರ ಮಾಡಿಕೊಳ್ಳದೆ ಅಡುಗೆ ಮಾಡಿ ಉಣಬಡಿಸಿದವರು ನಮ್ಮ ರೈತ ಅಕ್ಕ ತಂಗಿಯರು. ನೀರಾ ಚಳವಳಿಯಲ್ಲೂ ಕೂಡ, ಹಳ್ಳಿಗಳ ಗಂಡಸರೊಂದಿಗೆ ಹೆಣ್ಣುಮಕ್ಕಳು ಸರಿಸಮವಾಗಿ ಪಾಲ್ಗೊಂಡಿದ್ದರು. ಸರ್ಕಾರದ ದಬ್ಬಾಳಿಕೆಯಿಂದ ಪುರುಷರು ಜೈಲು ಸೇರಿದಾಗ ಎಲ್ಲಾ ಸಂದರ್ಭಗಳಲ್ಲೂ ಚಳವಳಿಯನ್ನು ಮುನ್ನಡೆಸಿದವರು ಮಹಿಳೆಯರೇ! ನೀರಾ ಚಳವಳಿಯಲ್ಲೂ ಅರಸೀಕೆರೆ, ಚನ್ನರಾಯಪಟ್ಟಣ ಭಾಗದಲ್ಲಿ, ಕೋಡಿಹಳ್ಳಿ ಚಂದ್ರಶೇಖರ್‌ರವರನ್ನು ಬಂಧಿಸಿ ಒಳಗೆ ಹಾಕಿದಾಗ, ಅವರ ಪತ್ನಿ ಜವಾಬ್ದಾರಿ ಹೊತ್ತರು. ಹೀಗೆ ಚಳವಳಿಗಳನ್ನು ಹೆಣ್ಣುಮಕ್ಕಳೇ ಮುಂದುವರೆಸಿದ ಸಾಕಷ್ಟು ಉದಾಹರಣೆಗಳಿದ್ದಾವೆ.

ನಮ್ಮ ತಂದೆ (ಪ್ರೊ. ನಂಜುಂಡಸ್ವಾಮಿ)ಯವರು ತಿಂಗಳಾನುಗಟ್ಟಲೆ ಮನೆಯಲ್ಲಿ ಇರುತ್ತಲೇ ಇರಲಿಲ್ಲ. ಮತ್ತೆ ರೈತ ಸಂಘಟನೆಗೆ ಆಗೆಲ್ಲ ಕಚೇರಿಗಳು ಎಲ್ಲೂ ಇರಲಿಲ್ಲ. ನಮ್ಮ ಮನೆಯೇ ಕೇಂದ್ರ ಕಚೇರಿ ಇದ್ದಂಗಿತ್ತು. ದೊಡ್ಡ ಹೋರಾಟಗಳಿದ್ದಾಗ ಮನೆಗೆ ಇಂಟಲಿಜನ್ಸ್‌ನವರು ಬರುತ್ತಿದ್ದರು ಅಥವಾ ಫೋನ್‌ ಮಾಡುತ್ತಿದ್ದರು. ಆಗ, ಇವರೆಲ್ಲ ಬೆಳಗಾವಿಯಲ್ಲಿ ಯಾವುದೋ ಹೋರಾಟ ಇಟ್ಟುಕೊಂಡು ಹೊರಟಿದ್ದರೆ, ನಮ್ಮ ತಾಯಿ ಕೇರಳಕ್ಕೆ ಹೋಗಿದ್ದಾರೆ ಎಂದು ದಿಕ್ಕು ತಪ್ಪಿಸುತ್ತಿದ್ದರು. ಒಮ್ಮೆ ದೆಹಲಿಯಲ್ಲಿ, ಡಂಕಲ್‌ ಪ್ರಸ್ತಾವನೆ ವಿರುದ್ಧ ಹೋರಾಟ ಇತ್ತು. ದೆಹಲಿಗೆ ಹೊರಟಿದ್ದ ರೈತ ನಾಯಕರನ್ನು ದಾರಿಯಲ್ಲೇ ಹಿಡಿದು ಬಂಧನದಲ್ಲಿಟ್ಟಿದ್ದರು. ಆಗೆಲ್ಲ ಮೊಬೈಲ್‌ಗಳಿರಲಿಲ್ಲ. ಶಾಸಕರಾಗಿದ್ದ ಹನುಮನಗೌಡರು ರೈತ ಕಾರ್ಯಕರ್ತರನ್ನು ಬಿಡಿಸಲು ಪ್ರಯತ್ನಿಸುತ್ತಿದ್ದರು. ಅವರು ಶಾಸಕರ ಭವನದಲ್ಲಿದ್ದುಕೊಂಡು ಮನೆಗೆ ಒಂದು ಫೋನ್‌ಗೆ ಕರೆ ಮಾಡಿದರೆ, ದೆಹಲಿಯಿಂದ ಇನ್ನೊಂದು ಫೋನ್‌ಗೆ ಕರೆ ಬರುತ್ತಿತ್ತು. ಅಮ್ಮ ಎರಡೂ ಫೋನ್‌ಗಳನ್ನೂ ರಿಸೀವ್‌ ಮಾಡಿಟ್ಟುಕೊಂಡು ಮಾತುಕತೆಯನ್ನು ಪರಸ್ಪರರಿಗೆ ರವಾನಿಸುತ್ತ ಸಮನ್ವಯ ಮಾಡುತ್ತಿದ್ದರು.

ರೈತ ಚಳವಳಿಯ ಪ್ರಮುಖ ನಾಯಕರಾಗಿ ನಮಗೆ ಪುರುಷರು ಹೆಚ್ಚು ಕಂಡರೂ ಕೂಡ, ಅದರ ಹಿಂದೆ ನಿಂತಿದ್ದ ಶಕ್ತಿ ಮಹಿಳೆಯರದ್ದೇ! ನಿಜವಾಗಿ ಹೇಳಬೇಕೆಂದರೆ, ಬೇರೆ ಯಾವುದೇ ರಾಜಕೀಯ ಆಕಾಂಕ್ಷೆಗಳಿಲ್ಲದೆ ರೈತ ಚಳವಳಿಯನ್ನು ಗಟ್ಟಿಯಾಗಿ ನಿಂತು ನಡೆಸಿದವರು, ನಡೆಸುತ್ತಿರುವವರು, ಅದನ್ನು ಪೂರ್ಣವಾಗಿ ಬೆಂಬಲಿಸಿದವರು ರೈತ ಮಹಿಳೆಯರೇ ಎಂದೇ ಹೇಳಬಹುದು.

ಪ್ರಶ್ನೆ: ಸ್ತ್ರೀವಾದಿ ಚಿಂತನೆಯ ಮೇಲೆ ರೂಪುಗೊಂಡಿರುವ ಮಹಿಳಾ ಚಳವಳಿಗೂ ಮತ್ತು ರೈತ ಚಳವಳಿಗೂ ನಡುವೆ ಯಾವ ರೀತಿಯ ಸಂಬಂಧ ಇರಬೇಕು ಎಂದು ನಿಮಗೆ ಅನ್ನಿಸುತ್ತದೆ?

ಚುಕ್ಕಿ: ಸ್ತ್ರೀವಾದಿ ಚಳವಳಿಯನ್ನು ಗಮನಿಸಿದಾಗ, ಅಂತಾರಾಷ್ಟ್ರೀಯ ಮಟ್ಟದಿಂದ ಹಿಡಿದು ಇಲ್ಲಿನವರೆಗೂ ಅದು ನಗರಕೇಂದ್ರಿತವಾಗಿದ್ದಂತಿತ್ತು. ಗ್ರಾಮೀಣ ಮಹಿಳೆಯರ ನೇರ ಪಾಲ್ಗೊಳ್ಳುವಿಕೆ ತಡವಾಗಿ ಆದದ್ದು. ಆದರೆ, ಇತ್ತೀಚೆಗೆ ವಾತಾವರಣ ಬದಲಾಗುತ್ತಿದೆ. ಅಂತಾರಾಷ್ಟ್ರೀಯ ರೈತ ಸಂಘಟನೆ ‘ಲಾ ವಯಾ ಕ್ಯಾಂಪಸ್ಸಿನಾ’ದಲ್ಲಿ ‘ರೈತ ಸ್ತ್ರೀವಾದ’ (ಪೆಸಂಟ್‌ ಫೆಮಿನಿಸಂ) ಎಂಬ ಆಲೋಚನಾ ಕ್ರಮವೇ ರೂಪುಗೊಂಡಿದೆ.

ಅದೇ ರೀತಿ, ಮಹಿಳಾವಾದಿ ಚಿಂತನೆಯ ಮುಂದೆಯೂ ಇದೊಂದು ಸವಾಲು. ಜನಸಂಘಟನೆಗಳಲ್ಲಿ ನಿಜವಾದ ವಿಕೇಂದ್ರೀಕರಣ ಬರಬೇಕಾದರೆ, ಅವು ಏಕವ್ಯಕ್ತಿ ನಾಯಕತ್ವದ ಸಂಘಟನೆಗಳಾಗದಂತೆ ಸಾಮೂಹಿಕವಾದ ಮತ್ತು ಮಹಿಳೆಯರನ್ನೂ ಒಳಗೊಂಡ ನಾಯಕತ್ವ ಬೆಳೆದು ಬರಬೇಕಾದರೆ, ಮಹಿಳೆಯರ ಒಳಗೊಳ್ಳುವಿಕೆ ನಿರ್ಧಾರಕವಾದುದು.

First published in https://vijaykarnataka.indiatimes.com/edit-oped/columns/women-leadership/articleshow/63218454.cms

Photo credit: Google Image


AUTHOR: Chukki Nanjundaswamy
Vice President of Swaraj India
Chukki Nanjundaswamy is a farmers’ leader from Karnataka Rajya Raitha Sangha has been at the forefront of the struggle for farmers’ rights focusing on the environment, sustainability, food sovereignty. As a managing trustee of Amrita Bhoomi (https://amritabhoomi.org/), the Agroecology school in Chamarajanagar, Karnataka she has been instrumental in creating a seed bank, developing models for sustainable agricultural practices and creating a space that seeks to bring in self-autonomy for the rural youth of the country.
chukki.krrs@gmail.com

The author’s views are personal.